ಒಬ್ಬ. ಮುಸ್ಲಿಮನಿಗೆ ಮುಸ್ಲಿಮನಾಗಿರಲು ಬೇಕಾಗಿರುವಂಥ ಮೊದಲ ಅವಶ್ಯಕತೆ ಇಸ್ಲಾಮಿನ ಜ್ಞಾನವಾಗಿದೆ. ಪವಿತ್ರ ಕುರ್ಆನಿನ ಬೋಧನೆಯೇನು? ಪ್ರವಾದಿವರ್ಯರ (ಸ) ವಿಧಾನ ಯಾವುದು? ದೇವಾನುಸರಣೆ ಎಂದರೇನು? ದೇವಾನುಸರಣೆ (ಇಸ್ಲಾಮ್) ಮತ್ತು ದೇವಧಿಕ್ಕಾರದ (ಕುಫ್ರ್) ನಡುವೆ ಇರುವ ವ್ಯತ್ಯಾಸವೇನು? ಇವುಗಳ ನಡುವೆ ಇಷ್ಟು ಅಂತರ ಯಾಕಿದೆ? ಮುಂತಾದವುಗಳ ಜ್ಞಾನ ಸಂಪಾದಿಸದೆ ಯಾವ ವ್ಯಕ್ತಿಯೂ ಮುಸ್ಲಿಮನಾಗಲಾರ.
ದೇವ ಗ್ರಂಥ ನಿಮ್ಮ ಬಳಿ ಇದೆ. ಅದರಲ್ಲಿ ಏನಿದೆ ಎಂಬುದು ನಿಮಗೆ ತಿಳಿಯದಿರುವುದಕ್ಕಿಂತ ಮಿಗಿಲಾದ ನಷ್ಟವೇನಿದೆ? ನೀವು ದಿನವೂ ನಮಾಝ್ ನಿರ್ವಹಿಸುತ್ತೀರಿ. ಆ ನಮಾಝ್ ನಲ್ಲಿ ದೇವನೊಂದಿಗೆ ನೀವೇನು ಹೇಳಿತ್ತಿದ್ದೀರಿ ಎಂದು ನಿಮಗೆ ತಿಳಿಯದೆ ಹೋದರೆ ಹೇಗೆ?
ಯಾವ ಕಲಿಮ ಪಠಿಸಿ ನೀವು ಮುಸ್ಲಿಮರಾಗಿದ್ದೀರೋ ಆ ಕಲಿಮದ ಅರ್ಥವೂ ನೀವು ಅರಿತಿಲ್ಲ; ಅದನ್ನು ಪಠಿಸಿದ ಮೇಲೆ ನಿಮ್ಮ ಮೇಲೆ ಯಾವ ಯಾವ ಕರ್ತವ್ಯ ಬಂದು ಬಿಡುತ್ತದೆ ಎಂದೂ ತಿಳಿಯದೆ ಹೋದರೆ ನೀವು ನೈಜ ಮುಸ್ಲಿಮರಾಗಿರುವುದು ಹೇಗೆ?
ಒಬ್ಬ ಮುಸ್ಲಿಮನ ಮಟ್ಟಿಗೆ ಇದಕ್ಕಿಂತ ಮಿಗಿಲಾದ ನಷ್ಟ ಬೇರೆ ಏನಿದೆ? ಉದ್ಯೋಗ ಸಿಗದೆ ಇದ್ದರೆ ಆಗುವ ನಷ್ಟ ನಿಮಗೆ ತಿಳಿದಿದೆ. ವ್ಯಾಪಾರ ವಹಿವಾಟು ನಷ್ಟವಾದರೆ ಆಗುವ ಹಾನಿ ನಿಮಗೆ ತಿಳಿದಿದೆ. ನಿಮ್ಮ ಜಮೀನು ನಾಶವಾದರೆ ಆಗುವ ನಷ್ಟವೂ ನಿಮಗೆ ತಿಳಿದಿದೆ. ಆದರೆ ಇಸ್ಲಾಮಿನ ಬಗ್ಗೆ ಅಜ್ಞರಾಗಿರುವುದರಿಂದ ಆಗುವ ನಷ್ಟ ಮಾತ್ರ ತಿಳಿದಿಲ್ಲ. ಈ ನಷ್ಟದ ಅರಿವು ಮೂಡಿದರೆ ಅದರಿಂದ ಪಾರಾಗುವ ದಾರಿಯೂ ನೀವು ಕಾಣುವಿರಿ.
ಅದರಿಂದ ಪಾರಾಗ ಬಯಸುವಿರಾದರೆ ಇಂದೇ ನಿಮ್ಮ ದೇವನು ನಿಮ್ಮಿಂದ ಏನು ಬಯಸುತ್ತಾನೆ ಎಂಬುದನ್ನು ಕುರ್ಆನಿನ ಮೂಲಕ ಅರಿಯಿರಿ. ಅದರ ಹೊರತು ಇಹಪರ ಯಶಸ್ಸು ಸಾಧ್ಯವಾಗದು. ನೀವು ಕುರ್ಆನ್ ಕಲಿಯಿರಿ. ಅದು ನಿಮಗೆ ಎಲ್ಲವನ್ನೂ ಕಲಿಸಿಕೊಡುವುದು...
ನಿಮ್ಮ ಜೀವನ ಹೇಗಿರಬೇಕು? ನೀವು ಏನು ಮಾಡಬೇಕು? ಏನು ಮಾಡಬಾರದು? ಯಾರನ್ನು ಅನುಸರಿಸಬೇಕು? ಯಾರನ್ನು ಅನುಸರಿಸಬಾರದು? ಯಾವುದು ವಿಜಯದ ಮಾರ್ಗ? ಯಾವುದು ನಾಶದ ಮಾರ್ಗ? ಎಂಬುದು ವಿಷದವಾಗಿ ಅಲ್ಲಿ ತಿಳಿಸಲಾಗಿದೆ.
ಅದು ನಿಮಗೆ ತಿಳಿಯಬೇಕಾದರೆ ಪವಿತ್ರ ಕುರ್ಆನಿನ ಅರ್ಥ ನೀವು ಕಲಿಯಲೇ ಬೇಕು. ಇಲ್ಲವಾದರೆ ನಿಮ್ಮ ಸೃಷ್ಟಿಕರ್ತನು ನಿಮ್ಮಿಂದ ಏನು ಬಯಸುತ್ತಾನೆ ಎಂಬುದನ್ನು ನೀವು ಹೇಗೆ ಅರಿಯುವಿರಿ? ಅದು ಅಲ್ಲಾಹನ ಮಾತುಗಳು. ಅವನ ಮಾತುಗಳಲ್ಲಿಯೇ ಅವನ ಇಂಗಿತವೇನು? ಏನು ಮಾಡಿದರೆ ಅವನು ಇಷ್ಟ ಪಡುತ್ತಾನೆ? ಏನು ಮಾಡಿದರೆ ಅವನು ಕೋಪಗೊಳ್ಳುವನು? ಎಂಬಿತ್ಯಾದಿ ವಿಷಯಗಳನ್ನು ನೀವೇ ನೇರವಾಗಿ ಅರಿಯಬಹುದಾಗಿದೆ.
ಈ ಉದ್ದೇಶಕ್ಕಾಗಿಯೇ ಅಲ್ಲಾಹನು ಕುರ್ಆನ್ ನಮಗೆ ನೀಡಿರುವನು. ಅದರಲ್ಲೇನಿದೆ ಎಂಬುದನ್ನು ತಿಳಿಯುವಲ್ಲಿ ನೀವು ಸೋತರೆ ಜೀವನದಲ್ಲೇ ನೀವು ಸೋಲುವಿರಿ ಖಂಡಿತ..
ಅಲ್ಲಾಹನು ಅವನ ಗ್ರಂಥ ಅರಿಯಲು ಪ್ರಯತ್ನಿಸಿ ಅದರಂತೆ ತಿದ್ದಿಕೊಳ್ಳುವ ಒಳ್ಳೆಯ ಮನಸ್ಸನ್ನು ನಮಗೆಲ್ಲ ನೀಡಲಿ ಆಮೀನ್....