ಶನಿವಾರ, ಜೂನ್ 11, 2016

ಅನಿವಾಸಿ ಭಾರತೀಯರ ನೋವನ್ನು ಅರ್ಥ ಮಾಡಿಕೊಳ್ಳಿ

ಓರ್ವ ಅನಿವಾಸಿ ಭಾರತೀಯ ಒಂದೆರಡು ವರ್ಷ ದುಡಿದು ದಣಿದು ತಾಯ್ನಾಡಿಗೆ ಬಂದಾಗ ಅಕ್ಕಪಕ್ಕದ ಅಥವಾ ಸಂಬಂಧಿಕರು ಹೇಳುವ ಮಾತು "ಅವನು ಗಲ್ಫ್ ಗೆ ಹೋಗಿ ಎರಡು ವರ್ಷ ಆಯಿತು. ಅಷ್ಟು ದೊಡ್ಡ ದೇಶಕ್ಕೆ ಹೋಗಿ ಇಷ್ಟು ವರ್ಷ ಇದ್ದು ನಮಗೆ ಕೊಟ್ಟಿದ್ದು ಕೇವಲ ಎರಡು ಚಾಕೋಲೇಟ್, ಎರಡು ಸೋಪ್, ಸ್ಯಾಂಪೂ ಮಾತ್ರವೆ?" ಓಹೋ ಹಾಗಾದರೆ ಇನ್ನೇನು ಬಯಸುತ್ತೀರಿ ನೀವು? ಮೊಬೈಲ್, ಲ್ಯಾಪ್ ಟಾಪ್, ಟಿವಿ ಅಥವಾ ಬೇರೆನು? ಕೆಲವರ ಸ್ನೇಹ ಸಂಬಂಧಗಳೆ ಇಷ್ಟು. ಬರೀ ಉಡುಗೊರೆಗಳ ಮೇಲೆ ಅವಲಂಬಿಸಿರುತ್ತದೆ. ಇವರಿಗೆ ಅನಿವಾಸಿ ಭಾರತೀಯರ ಕಷ್ಟಗಳು ಅರ್ಥವಾಗೋದೆ ಇಲ್ಲ.

    ವ್ಯಕ್ತಿ ಗಲ್ಫ್ ನಿಂದ ತಾಯ್ನಾಡಿಗೆ ಬಂದಾಗ ಇಂತಹ ಬೇಡಿಕೆಗಳನ್ನು ಇಡುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆತ ಎರಡು ವರ್ಷ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯಲು ಹೋಗಿ ತನಗೇನು ನೀಡಿಲ್ಲ ಅನ್ನುವ ಸ್ವಾರ್ಥ ಮನೋಭಾವ ಇಟ್ಟುಕೊಳ್ಳುವ ಜನರ ಈಗಲೂ ನಮ್ಮೊಡನೆ ಇದ್ದಾರೆ. ವ್ಯಕ್ತಿ ತನ್ನ ದೇಶವನ್ನ ತೊರೆದು ಪರದೇಶಕ್ಕೆ ಹೋಗುವುದರ ಉದ್ದೇಶ ತಾನು ಸಾಕಷ್ಟು ಹಣ ಗಳಿಸಿ ಶ್ರೀಮಂತರಾಗಿ ಬದುಕು ಸಾಗಿಸಬೇಕೆಂದಲ್ಲ, ಆತನಿಗೆ ಆತನದ್ದೆಯಾದ ಕಷ್ಟಗಳು ತುಂಬಿರುತ್ತದೆ. ನಮ್ಮ ದೇಶದಲ್ಲಿ ಸರಿಯಾದ ದುಡಿಮೆ ಇದ್ದರು ಅದಕ್ಕೆ ಅನುಗುಣವಾಗಿ ಸಂಬಳಗಳು ಲಭಿಸಲ್ಲ. ಕೆಲವೊಮ್ಮೆ ಕೆಲಸ ಸಿಕ್ಕರು ಸಿಕ್ಕಿತು ಇಲ್ಲದಿದ್ದರೆ ಇಲ್ಲ. ಮನೆಯಲ್ಲಿ ನೂರಾರರು ಸಮಸ್ಯೆಗಳು. ಮನೆ ನಿರ್ಮಿಸಬೇಕು, ತಂಗಿಯ ಮದುವೆ, ಮಕ್ಕಳ ವಿದ್ಯಾಭ್ಯಾಸ ಹೇಳಿ ತೀರುವಂತಲ್ಲ. ಒತ್ತಡದ ಮೇಲೆ ಒತ್ತಡ.

     ತಂದೆ ತಾಯಿ, ಮಡದಿ ಮಕ್ಕಳು ಒಟ್ಟಿನಲ್ಲಿ ಇಡೀ ಮನೆಯವರನ್ನು ಬಿಟ್ಟು ದೂರದ ಪರವೂರಿನಲ್ಲಿ ದುಡಿಯಲು ಬಂದವರ ಪರಿಸ್ಥಿತಿ ಅವರಿಗೆ ಮಾತ್ರವೇ ಅರ್ಥವಾಗಲು ಸಾಧ್ಯ. ನಲ್ವತ್ತರಿಂದ ಐವತ್ತು ಡಿಗ್ರಿ ಮಧ್ಯೆಯಿರುವ ಬಿಸಿಲಿನ ತಾಪಮಾನವನ್ನು ಸಹಿಸಿ ಇಲ್ಲಿ ದುಡಿಯುವರ ಅವಸ್ಥೆಯನ್ನು ನೋಡಿದರೆ ಕರುಳು ಹಿಂಡಿದಾಗುತ್ತದೆ. ಬಾಯಾರಿಕೆ ಹೆಚ್ಚಾಗಿ ಅದನ್ನು ನೀಗಿಸಲು ಒಂದು ಗ್ಲಾಸ್ ಜ್ಯೂಸ್ ಕುಡಿಯೋಣ ಎಂದಾಗ ಹತ್ತಾರು ಬಾರಿ ಯೋಚಿಸಬೇಕಾಗುತ್ತದೆ. ಒಂದು ಗ್ಲಾಸ್ ಜ್ಯೂಸ್ ಗೆ ದುಬಾರಿ ಮೊತ್ತವನ್ನು ತೆರಬೇಕಾಗುತ್ತದೆ. ಅಷ್ಟು ದುಬಾರಿ ತೆತ್ತು ಕುಡಿಯುವಾಗ ತಂದೆ ತಾಯಿ, ಮಡದಿ ಮಕ್ಕಳು ಹೇಗಿರುವವರೆನ್ನುವ ದೃಶ್ಯ ಕಣ್ಣಮುಂದೆ ಹಾದು ಹೋದಾಂತಾಗುತ್ತದೆ. ಸಿಗುವ ಸಂಬಳದಲ್ಲಿ ಅರ್ಧದಷ್ಟು ರೂಂ ಬಾಡಿಗೆ, ಮೂರು ಹೊತ್ತು ಊಟ ತಿಂಡಿ, ಮತ್ತು ಫೋನ್ ಕಾಲ್ ಅದು ಇದು ಅಂತಾನೇ ಖಾಲಿಯಾಗುತ್ತದೆ. ಉಳಿದರ್ಧವನ್ನು ಮನೆಗೆ ಕಳುಹಿಸಿ ಕೊಡಬೇಕು ಅಷ್ಟು ಮಾತ್ರವಲ್ಲ ಕೆಲವೊಮ್ಮೆ ಸ್ನೇಹಿತರು, ಸಂಬಂಧಿಕರು ತಮ್ಮ ಕಷ್ಟಗಳನ್ನು ಹೇಳುತ್ತ ಬರುತ್ತಾರೆ. ಇದ್ದಾಗ ಹಿಂದೆ ಮುಂದೆ ನೋಡದೆ ಕೊಡುತ್ತೇವೆ ಇಲ್ಲವಾದರೆ ಎಲ್ಲಿಂದ ಕೊಡೊದು? ಇಲ್ಲವೆಂದರೂ ಅವರಿಗೆ ಅರ್ಥವಾಗಬೇಕೇ?

   ಗಲ್ಫ್ ರಾಷ್ಟ್ರದ ಅರ್ಧ ಸಂಬಳ ಸಿಕ್ಕರು ಊರೇ ಸ್ವರ್ಗ ಎನ್ನುವ ಎಷ್ಟೊ ಜನ ಅನಿವಾಸಿಗಳನ್ನ ನಾವು ಕಾಣಬಹುದು ಯಾಕೆಂದರೆ ಒಂಟಿ ಜೀವನ ಅನ್ನೋದು ಅವನಿಗೆ ಸಾಕಾಗಿ ಹೋಗಿರುತ್ತದೆ. ಅವಿವಾಹಿತರಾದರೂ ಹೇಗೋ ದಿನವನ್ನು ದೂಡುತ್ತಾರೆ ಆದರೆ ವಿವಾಹಿತರಾದರೆ ಅವರ ಕಷ್ಟಗಳು ಅರ್ಥ ಮಾಡಿಕೊಳ್ಳಲು ಬಹುಶಃ ಮತ್ತೊಂದು ವಿವಾಹಿತನಿಂದಲೇ ಸಾಧ್ಯ. ಆತನ ಒಂಟಿತನವು ಬರೀ ದೈಹಿಕವಾಗಿ ಸುಖಸಂತೋಷಗಳನ್ನು ಬಯಸುವುದಲ್ಲ ಬದಲಿಗೆ ಆತ ತನ್ನ ಕುಟುಂಬಸ್ಥರ ಸುಖಸಂತೋಷಗಳಲ್ಲಿ ಭಾಗಿದಾರನಾಗಲು ಬಯಸುತ್ತಾನೆ. ತನ್ನ ಮಕ್ಕಳ ತುಂಟಾಟದ ದಿನಗಳನ್ನು ಕಳೆದುಕೊಂಡ ನೋವಿನಲ್ಲೇ ಬೇಯುತ್ತಿರುತ್ತಾನೆ. ಹೊರ ದೇಶದಿಂದ ದುಡಿದು ಬರುವಾಗ ದೂರದ ದೃಷ್ಟಿಯಲ್ಲಿ ಆತನು ಶ್ರಿಮಂತ ಪುರುಷನಾಗಿ ಕಾಣಬಹುದು ಆದರೆ ಆತನ ಒಳಮನಸ್ಸು ಕಾಣಲು ಸಾಧ್ಯವಿದೆ ಎಂದಾದರೆ ಆತ ಹೊರದೇಶದಲ್ಲಿ ಅದೆಷ್ಟು ಹಿಂಸೆಯನ್ನು ಸಹಿಸಿದ್ದ ಎಂದು ಕಾಣಲು ಸಾಧ್ಯವಾಗುತ್ತಿತ್ತು.

    ಇದು ಪ್ರತಿಯೊಬ್ಬ ಪ್ರವಾಸಿಯ ಮನದೊಳಗಿರುವ ನೋವು. ಕೆಲವೊಮ್ಮೆ ಅವುಗಳನ್ನು ಇತರರ ಬಳಿ ಹೇಗೆ ಹಂಚಿಕೊಳ್ಳಬೇಕು ಅನ್ನುವುದೇ ತಿಳಿಯದಷ್ಟು ಮುಗ್ಧನಾಗುತ್ತಾನೆ. ಇದಾಗಿದೆ ವಾಸ್ತವದಲ್ಲಿ ಓರ್ವ ಅನಿವಾಸಿ ಭಾರತೀಯನ ಬದುಕು. ಈ ಲೇಖನದ ಉದ್ದೇಶ ಸ್ವದೇಶದಲ್ಲಿದ್ದ ಸ್ನೇಹಿತರ ಅಥವಾ ಕುಟುಂಬಿಕರನ್ನು ನೋಯಿಸುವ ಸಲುವಾಗಿಯಲ್ಲ. ಓರ್ವ ಅನಿವಾಸಿ ಭಾರತೀಯನ ಕಷ್ಟಗಳನ್ನು ಓದಿಯಾದದರು ಅರ್ಥೈಸಿಕೊಳ್ಳಿ ಎಂದಾಗಿದೆ. ದಯವಿಟ್ಟು ಇನ್ನು ಮುಂದೆ ಓರ್ವ ಆನಿವಾಸಿ ಭಾರತೀಯ ತಾಯ್ನಾಡಿಗೆ ಬಂದಾಗ ಆತ ತನಗೇನು ತಂದಿಲ್ಲ ಎಂದು ಕೋಪಗೊಳ್ಳಬೇಡಿ. ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಇರುವ ಒಂದೆರಡು ತಿಂಗಳು ಮನೆಯವರೊಂದಿಗೆ ಸುಖಸಂತೋಷಗಳಿಂದ ಇರಲಿ. ಆವರು ಕೊಟ್ಟ ಒಂದು ಚಾಕೋಲೇಟಾದರೂ ಸರಿ ಅದನ್ನು ಸ್ವೀಕಾರ ಮಾಡಿ ಅವರಿಗೆ ಧನ್ಯವಾದ ಅರ್ಪಿಸಿ ಖುಷಿಯಿಂದ ಇರಿ. ಇದೇ ನಾನು ಎಲ್ಲರಲ್ಲಿ ಮಾಡುವ ಮನವಿ.

*ಸಲಾಂ ಸಮ್ಮಿ*