ಮಂಗಳವಾರ, ಜುಲೈ 5, 2016

ತನ್ನಂತೆ ಪರರ ಬಗೆದೊಡೆ

 ಸೃಜನಾನಂದ.
ಕೃಪೆ: ಪ್ರಜಾವಾಣಿ

‘ನನ್ನನ್ನೇಕೆ ಅವರು ಅಷ್ಟೊಂದು ದ್ವೇಷಿಸುತ್ತಾರೆ?’ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಕೇಳಿಕೊಂಡಿರುತ್ತೇವೆ. ಇದಕ್ಕೆ ನಮಗೆ ಉತ್ತರ ಬೇಕೆಂದರೆ  ‘ನಾನೇಕೆ ಅವರನ್ನು ಅಷ್ಟೊಂದು ದ್ವೇಷಿಸುತ್ತೇನೆ?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ನಾವು ಯಾರೂ ಈ ಪ್ರಶ್ನೆಯನ್ನು ಯಾವತ್ತೂ ಕೇಳಿಕೊಂಡಿರುವುದಿಲ್ಲ. ಆದ್ದರಿಂದ ನಮ್ಮನ್ನು ದ್ವೇಷಿಸುವವರ ಬಗ್ಗೆ ಮಾತ್ರ ನಮಗೆ ಪ್ರಶ್ನೆಗಳಿರುತ್ತವೆ.

ಇಲ್ಲಿ ಇನ್ನೊಂದು ವಿಚಾರವಿದೆ. ದ್ವೇಷ ಯಾಕೆ ಎಂಬ ಪ್ರಶ್ನೆ ಯಾರದೇ ಮನಸ್ಸಿನಲ್ಲಿ ಯಾವುದೇ ಬಗೆಯಲ್ಲಿ ಹುಟ್ಟಿದರೂ ಅದೊಂದು ಧನಾತ್ಮಕ ವಿಚಾರ. ಏಕೆಂದರೆ ಎಷ್ಟೋ ಸಂದರ್ಭದಲ್ಲಿ ನಾವು ದ್ವೇಷಿಸುತ್ತೇವೆ ಎಂಬುದರ ಅರಿವೇ ಇಲ್ಲದೆ ನಾವು ಯಾರ್‍ಯಾರನ್ನೋ ದ್ವೇಷಿಸುತ್ತಿರುತ್ತೇವೆ. ಆದ್ದರಿಂದ ದ್ವೇಷದ ಕುರಿತು ನಾವು ಜಾಗೃತರಾಗುವುದು ಅತ್ಯಂತ ಅವಶ್ಯಕ. ಒಮ್ಮೆ ಈ ಅರಿವು ಮೂಡಿತೆಂದರೆ ದ್ವೇಷದ ಕಾರಣಗಳು ಮತ್ತು ಅದರ ಇತಿಹಾಸ ಇತ್ಯಾದಿಗಳ ಬಗ್ಗೆ ಯೋಚಿಸಲು ಸಾಧ್ಯವಿದೆ.

ವೈಯಕ್ತಿಕ ಮಟ್ಟದ ದ್ವೇಷಗಳಿಗೂ ಸಾಮುದಾಯಿಕ ಮಟ್ಟದ ದ್ವೇಷಗಳಿಗೂ ವ್ಯತ್ಯಾಸವಿದೆ. ನಿರ್ದಿಷ್ಟ ವ್ಯಕ್ತಿಯನ್ನು ನಿರ್ದಿಷ್ಟ ಕಾರಣಕ್ಕಾಗಿ ದ್ವೇಷಿಸುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಆದರೆ, ಒಂದು ಸಮುದಾಯ ಅಥವಾ ಒಂದು ವರ್ಗವನ್ನು ಮತ್ತೊಂದು ವರ್ಗ ಅಥವಾ ಸಮುದಾಯ ದ್ವೇಷಿಸುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಉದಾಹರಣೆಗೆ ಎರಡು ಜಾತಿ ಅಥವಾ ಧರ್ಮಗಳ ನಡುವಣ ಜಗಳವನ್ನು ತೆಗೆದುಕೊಂಡರೆ ಇದು ಅರ್ಥವಾಗುತ್ತದೆ.

ಹೊರ ನೋಟಕ್ಕೆ ಪರಸ್ಪರ ದ್ವೇಷಿಸುವ ಗುಂಪುಗಳಂತೆ ಕಾಣುವ ಸಮುದಾಯಗಳ ವ್ಯಕ್ತಿಗಳು ಪರಸ್ಪರ ಬಹಳ ಗೆಳೆತನದಿಂದ ಇರಬಹುದಾದ ಸಾಧ್ಯತೆ ಬಹಳ ಹೆಚ್ಚು. ಈ ದ್ವೇಷ ಹೆಚ್ಚು ಅಮೂರ್ತವಾದುದು. ಈ ದ್ವೇಷ ಯಾವುದೇ ನಿರ್ದಿಷ್ಟ ವ್ಯಕ್ತಿಯ ಕುರಿತಂತೆ ಅಲ್ಲವೇ ಅಲ್ಲ. ಇದು ಪರಿಕಲ್ಪನೆಗೆ ಸಂಬಂಧಿಸಿದ ದ್ವೇಷ. ಸೂಕ್ಷ್ಮದಲ್ಲಿ ನೋಡಿದರೆ ಪರಿಕಲ್ಪನೆಗಳ ಮಧ್ಯೆಯೂ ದೊಡ್ಡ ವ್ಯತ್ಯಾಸವೇನೂ ಇರುವುದಿಲ್ಲ.

ಇಷ್ಟಕ್ಕೂ ಸಮುದಾಯಗಳು ಪರಸ್ಪರ ದ್ವೇಷಿಸಲು ಕಾರಣವೇನಿರಬಹುದು? ಪರಸ್ಪರರನ್ನು ಸಾಮುದಾಯಿಕವಾಗಿ ಅರ್ಥ ಮಾಡಿಕೊಳ್ಳದೇ ಇರುವುದೇ ಈ ದ್ವೇಷಕ್ಕೆ ಕಾರಣ ಎನ್ನಬಹುದು. ಒಮ್ಮೆ ಈ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿತೆಂದರೆ ಮತ್ತೆ ದ್ವೇಷವಿರುವುದಿಲ್ಲ. ಪ್ರತಿಯೊಂದು ಸಮುದಾಯದ ವ್ಯಕ್ತಿಯೂ ಕೇವಲ ತನ್ನದೇ ನೆಲೆಯಲ್ಲಿ ಮತ್ತೊಂದು ಸಮುದಾಯದ ಮತ್ತೊಬ್ಬನನ್ನು ಕಂಡಾಗ ಸಮಸ್ಯೆ ಇರುವುದಿಲ್ಲ. ಆದರೆ ಆ ವ್ಯಕ್ತಿಯನ್ನು ಮತ್ತೊಂದು ಸಮುದಾಯದ ಪ್ರತಿನಿಧಿಯಾಗಿ ಕಾಣುವಾಗ ಮಾತ್ರ ಈ ಸಮಸ್ಯೆ ಉದ್ಭವಿಸುತ್ತದೆ.

ಒಂದು ನಿರ್ದಿಷ್ಟ ಸಮುದಾಯವನ್ನು ದ್ವೇಷಿಸಬೇಕೆಂಬ ನಮ್ಮ ಮನೋಭಾವವನ್ನು ನಾನೇ ಒಮ್ಮೆ ಪುನರ್ ಪರಿಶೀಲಿಸಿಕೊಂಡರೆ ನಮ್ಮನ್ನೇಕೆ ಇನ್ಯಾರೋ ದ್ವೇಷಿಸುತ್ತಾರೆ ಎಂಬುದಕ್ಕೆ ಉತ್ತರ ದೊರೆಯುತ್ತದೆ. ಎರಡೂ ಕಡೆಯಿಂದಲೂ ಅಸ್ತಿತ್ವದಲ್ಲಿ ಇಲ್ಲದೇ ಇರುವ ಶತ್ರುವನ್ನು ಸೃಷ್ಟಿಸಿಕೊಂಡು ಪರಸ್ಪರ ದ್ವೇಷಿಸುತ್ತೇವೆ ಎಂಬುದು ಅರ್ಥವಾಗುತ್ತದೆ. ದುರದೃಷ್ಟವಶಾತ್ ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೇ ಅವಕಾಶ ನೀಡದಂಥ ಸಾಮಾಜಿಕ ವಾತಾವರಣ ನಮ್ಮ ನಡುವೆ ಸ್ಥಿರವಾಗುತ್ತಿದೆ. ಈ ಕಾಲದ ದೊಡ್ಡ ಸವಾಲೆಂದರೆ ಈ ಸಿದ್ಧ ಮಾದರಿಗಳನ್ನು ಒಡೆದು ಮೇಲೆ ಬರುವುದು.

ನಾವು ನಮ್ಮ ಬಗ್ಗೆಯೇ ಹೆಚ್ಚು ಚಿಂತಿಸತೊಡಗಿದರೆ ಪರರ ಬಗೆಗಿನ ನಮ್ಮ ನಿಲುವುಗಳನ್ನು ವಿಮರ್ಶಿಸಿಕೊಳ್ಳಲು ಪ್ರಯತ್ನಿಸಿದರೆ ಮಾತ್ರ ಈ ಸಮಸ್ಯೆಗೊಂದು ಪರಿಹಾರ ಸಿಗುತ್ತದೆ. ಅದನ್ನು ಮಾಡದಂತೆ ತಡೆಯುವ ಅನೇಕ ಶಕ್ತಿಗಳಿವೆ. ಕೆಲವೊಮ್ಮೆ ಅದು ರಾಜಕಾರಣ. ಇನ್ನು ಕೆಲವು ಸಂದರ್ಭಗಳಲ್ಲಿ ಅದು ಸಾಮಾಜಿಕ ಕಟ್ಟುಪಾಡುಗಳ ಸ್ವರೂಪದಲ್ಲಿ ಕಾಣಸಿಗುತ್ತದೆ. ಇದನ್ನು ಮೀರುವುದನ್ನು ಸರ್ವಜ್ಞ ಬಹಳ ಚೆನ್ನಾಗಿ ವಿವರಿಸಿದ್ದಾನೆ ‘ತನ್ನಂತೆ ಪರರ ಬಗೆದೊಡೆ ಕೈಲಾಸವಕ್ಕು’. ನಮ್ಮಂತೆ ಇತರರನ್ನು ಪರಿಭಾವಿಸುವುದೊಂದೇ ನಮ್ಮನ್ನು ನಾವು ಒಳಿತಿನತ್ತ ಕೊಂಡೊಯ್ಯುವ ಮಾರ್ಗ.